171 ಸಂವತ್ಸರ ಕಂಡ ಭಾರತೀಯ ರೈಲ್ವೆ..
18 Apr, 2024
ಬೆಂಗಳೂರು : ಒಂದು ಲಕ್ಷ ಕಿಲೋ ಮೀಟರ್ಗೂ ಹೆಚ್ಚು ಟ್ರ್ಯಾಕ್ ಗಳನ್ನು ದೇಶಾದ್ಯಂತ ಹೊಂದಿರುವ ಹೆಮ್ಮೆ ನಮ್ಮ ಭಾರತೀಯ ರೈಲ್ವೆಗೆ ಇದೆ. ದೇಶದ ಜನರ ಜೀವನಾಡಿಯಂತಿರುವ ನಮ್ಮ ರೈಲ್ವೆ ನಮ್ಮೆಲ್ಲರ ಹೆಮ್ಮೆಯ ಪ್ರತೀಕವೂ ಹೌದು. ಜಾಗತೀಕ ಮಟ್ಟದಲ್ಲಿ ದೊಡ್ಡ ಜಾಲ ಹೊಂದಿರುವ ರೈಲ್ವೆಗಳ ಪೈಕಿ, ನಮ್ಮ ದೇಶದ ರೈಲ್ವೇ ಇಲಾಖೆ ನಾಲ್ಕನೇ ಸ್ಥಾನದಲ್ಲಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ವಿಶ್ವದ ನಾಲ್ಕನೇ ಅತೀ ಉದ್ದನೆಯ ಭಾರತೀಯ ರೈಲ್ವೆ ಇಲಾಖೆ ದೇಶದಲ್ಲಿ ರೈಲು ಓಡಿಸಲು ಆರಂಭಗೊಂಡು ಬರೋಬ್ಬರಿ 171 ವರ್ಷಗಳು ಕಳೆದು ಬಿಟ್ಟಿದೆ.

ಅಂದು ಬ್ರಿಟಿಷರು ಆರಂಭಿಸಿದ್ದ ರೈಲ್ವೆ ಹಲವು ಏಳು ಬೀಳಿನ ನಡುವೆ ಇಂದಿಗೂ ನಮ್ಮ ಜನಮನದ ಸಾರಿಗೆ ಸಂಪರ್ಕವಾಗಿ ಬೆಳೆಯುತ್ತಿದೆ. ಭಾರತೀಯ ರೈಲ್ವೆಯು ತನ್ನ ಸಾರಿಗೆ ಸಂಪರ್ಕ ಜಾಲದಲ್ಲಿ ಸುಸ್ಥಿರ, ತ್ವರಿತ ಮತ್ತು ಶಕ್ತಿ-ಸಮರ್ಥ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ನಿರಂತರ ಕೆಲಸ ಮಾಡುತ್ತಿದೆ. ಇಂದು ಬ್ರಾಡ್ ಗೇಜ್ ಟ್ರ್ಯಾಕ್ಗಳು ಬಹುತೇಕ ವಿದ್ಯುದೀಕರಣಗೊಂಡು ಬದಲಾಗುವ ಹಂತದಲ್ಲಿ ಇವೆ. ಎಲ್ಲಾ ಮಾರ್ಗಗಳನ್ನು ವಿದ್ಯುತ್ ಮೂಲಕ ವ್ಯವಹರಿಸುವಂತೆ ಮಾಡಲು ರೈಲ್ವೆ ಇಲಾಖೆ ಅಹೋರಾತ್ರಿ ಕಾರ್ಯತತ್ಪರತೆಯಿಂದ ಕೆಲಸ ಮಾಡುತ್ತಿದೆ.
ಇಂದು ನಮ್ಮ ದೇಶದ ಎಲ್ಲ ರಾಜ್ಯಗಳ ಉದ್ದಗಲಕ್ಕೂ ರೈಲ್ವೆ ಜಾಲವಿದೆ. ದೇಶದ ಜನರು ಸಾರಿಗೆಗಾಗಿ ನಂಬಿದ್ದು, ಜನರ ಮೊಲದ ಆಯ್ಕೆ ಭಾರತೀಯ ರೈಲ್ವೆ..! ಅದಕ್ಕಾಗಿಯೇ ದೇಶದ ಜನರ ಜೀವನಾಡಿ ಈ ರೈಲ್ವೆ ಇಲಾಖೆ ಎಂದು ಗುರುತಿಸಿಕೊಂಡಿದೆ. ಒಂದಿಲ್ಲೊಂದು ರೀತಿಯಲ್ಲಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿರುವ ರೈಲ್ವೆ, ಇಂದು ಗ್ರಾಮಾಂತರ ಪ್ರದೇಶ ಸೇರಿದಂತೆ, ಉಪನಗರಗಳಿಂದ ಆದಿಯಾಗಿ ನಗರ ಸಾರಿಗೆ ಜಾಲದವರೆಗೆ ಅಭಿವೃದ್ಧಿ ಮಾಡುತ್ತಲೇ ಬಂದಿದೆ. 31 ಮಾರ್ಚ್ 2022ರ ವರೆಗೆ ಭಾರತೀಯ ರೈಲ್ವೆ ನೆಟ್ವರ್ಕ್ ಟ್ರ್ಯಾಕ್ ಬರೋಬ್ಬರಿ 128,305 ಕಿ.ಮೀ ಗಳಷ್ಟು..! ಅಂದರೆ 79,725 ಮೈಲಿಗಳ ಉದ್ದದ ರೈಲ್ವೆ ಸಂಪರ್ಕ ನಮ್ಮ ದೇಶ ಹೊಂದಿದೆ.
1853ರಲ್ಲಿ ನಮ್ಮ ದೇಶದಲ್ಲಿ ಮೊದಲ ರೈಲು ಸಂಚಾರವಾಗಿತ್ತು. ಮಹಾರಾಷ್ಟ್ರದ ಬೋರಿ ಬಂದರ್ ನಿಂದ ಥಾಣೆಗೆ ಮೊದಲ ರೈಲು ಸಂಚರಿಸಿತ್ತು. ಭಾರತೀಯ ರೈಲ್ವೇಯು 1853 ರ ಏಪ್ರಿಲ್ 16 ರಂದು ಬೋರಿ ಬಂದರ್ನಿಂದ ಥಾಣೆಗೆ 34 ಕಿಮೀ ದೂರವನ್ನು ಒಳಗೊಂಡ ಮೊದಲ ಪ್ಯಾಸೆಂಜರ್ ರೈಲು ಅದಾಗತ್ತು. ಅಲ್ಲಿಯವರಗೆ ಒಂದೆರಡು ಗೂಡ್ಸ್ ಟ್ರೇನುಗಳನ್ನು ಪ್ರಯೋಗಾರ್ಥವಾಗಿ ಬಳಸಲಾಗುತ್ತಿತ್ತು. ಆದರೆ ಬೋರಿ ಬಂದರ್ ಟು ಧಾಣೆಯ ಈ ಟ್ರೈನು ನಮ್ಮ ದೇಶದ ಮೊದಲ ಅಧಿಕೃತ ಪ್ಯಾಸೆಂಜರ್ ರೈಲು.

ಅಲ್ಲಿಂದ ಭಾರತೀಯ ರೈಲು ಈ ವರ್ಷದ ʻಸಾರಿಗೆ ದಿನʼ 2024 ರ ಏಪ್ರಿಲ್ 16ವರೆಗೆ ಯಶಶ್ವಿಯಾಗಿ, ಒಂದೂವರೆ ಶತಮಾನಗಳ ಕಾಲ ದೀರ್ಘ ಸೇವೆ ನೀಡುತ್ತಾ ಬಂದು ದೇಶದ ಹೆಮ್ಮೆಗೆ ಕಾರಣವಾಗಿದೆ. ಆರಂಭದಲ್ಲಿ ಪ್ಯಾಸೆಂಜರ್ ರೈಲನ್ನು ʻಸಾಹಿಬ್ʼ, ʻಸುಲ್ತಾನ್ʼ ಮತ್ತು ʻಸಿಂಧ್ʼ ಎಂಬ ಹೆಸರಿನ ಮೂರು ಇಂಜಿನ್ಗಳು ನಿರ್ವಹಿಸುತ್ತಿದ್ದವು. ಒಟ್ಟು ಹದಿಮೂರು ಬೋಗಿಗಳ ಆ ರೈಲು ಸಂಚರಿಸಿದ ದಿನವನ್ನು 'ಭಾರತೀಯ ರೈಲು ಸಾರಿಗೆ ದಿನ'ವೆಂದು ಆಚರಿಸಲಾಗುತ್ತಿದೆ. ಭಾರತೀಯ ರೈಲ್ವೆಯ ಪ್ರಕಾರ ಮೊದಲ ರೈಲಿನ ಚಾಲನೆಗೆ 1853 ಏಪ್ರಿಲ್ 16 ರಂದು ಅಧಿಕೃತ ಚಾಲನೆ ನೀಡಲಾಯಿತು. ಸುಮಾರು 400 ಅತಿಥಿಗಳನ್ನು ಹೊತ್ತ ಆ ರೈಲು ಬೋರಿ ಬಂದರ್ನಿಂದ ಮಧ್ಯಾಹ್ನ 3.30 ಗಂಟೆಗೆ ಪ್ರಯಾಣ ಆರಂಭಿಸಿತು. ಬೃಹತ್ ಜನ ಸಮೂಹದ ಚಪ್ಪಾಳೆ, 21 ಬಂದೂಕುಗಳ ವಂದನಾ ಘರ್ಜನೆ ಮಧ್ಯೆ ರೈಲು ಪ್ರಯಾಣಿಸಿತು. ಆ ಚಂದವನ್ನು ನೋಡಿದ ನಮ್ಮವರು ಹೆಮ್ಮೆಯಿಂದ ನಮ್ಮ ದೇಶದಲ್ಲಿಯೂ ಉಗಿಬಂಡಿ ಓಡುವ ಕಾಲ ಬಂದಿದೆ ಎಂದು ಹಿರಿ ಹಿರಿ ಹಿಗ್ಗಿದನ್ನು ರೈಲ್ವೆ ಇಲಾಖೆ ದಾಖಲಿಸಿ ಇಟ್ಟಿದೆ.

ಈ ಕುರಿತು ಸೆಂಟ್ರಲ್ ರೈಲ್ವೆ ಇಲಾಖೆಯು ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದೆ. ಸೆಂಟ್ರಲ್ ರೈಲ್ವೆ ಈ ಬಗ್ಗೆಒಂದು ಸಂಕ್ಷಿಪ್ತ ಪೋಸ್ಟ್ ಮಾಡಿದೆ. ಅದರಲ್ಲಿ ''1853 ರಲ್ಲಿ, ಇಂದಿಗೆ ಸರಿಯಾಗಿ 171 ವರ್ಷಗಳ ಹಿಂದೆ, ಬೋರಿ ಬಂದರ್ನಿಂದ ಥಾಣೆಗೆ ಮೊದಲ ರೈಲಿನ ಉದ್ಘಾಟನೆ ಆಗಿತ್ತು. ಮೊದಲ ರೈಲಿನ ಪ್ರಯಾಣ ವಿಜೃಂಭಣೆಯಿಂದ ಸಾಗಿತು. ಇದರೊಂದಿಗೆ ಭಾರತವು ಸಾರಿಗೆ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲನ್ನು ಮಾಡಿತು. ಈ ಪ್ರಮುಖ ಕ್ಷಣವು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಸಂಪರ್ಕದ ಹೊಸ ಯುಗಕ್ಕೆ ನಾಂದಿ ಹಾಡಿತು'' ಎಂದು ಸೆಂಟ್ರಲ್ ರೈಲ್ವೆ ಬರೆದುಕೊಂಡಿದೆ. ಇನ್ನೂ ಸೆಂಟ್ರಲ್ ರೈಲ್ವೆ ಪೋಸ್ಟ್ ಮಾಡಿರುವ ರೈಲು, ಭಾರತದಲ್ಲಿ ರೈಲ್ವೇಯ ಆರಂಭಿಕ ದಿನಗಳ ದೃಶ್ಯವನ್ನು ಸಾರಿ ಹೇಳುತ್ತದೆ. ಪ್ರಪಂಚದಲ್ಲೇ ಅತಿದೊಡ್ಡ ಸಾರ್ವಜನಿಕ ಸಾರಿಗೆ ಸಂಸ್ಥೆಯಾಗಿ, ಅತೀ ದೊಡ್ಡ ಉದ್ಯೋಗ ಸಮೂಹ ಹೊಂದಿರುವ ರೈಲ್ವೆಯು ಪ್ರತಿ ನಿತ್ಯ 2.3 ಕೋಟಿ ಗೂ ಹೆಚ್ಚು ರೈಲ್ವೆ ಪ್ರಯಾಣಿಕರಿಗೆ ಸೇವೆ ನೀಡುತ್ತಿದೆ. ಇದು ಜಾಗತೀಕ ಮಟ್ಟದಲ್ಲಿ ದಾಖಲೆ ಸೃಷ್ಟಿಸಿರುವ ಸಂಖ್ಯೆಯಾಗಿದೆ. ಇದರಿಂದ ಭಾರತೀಯರು ರೈಲ್ವೆ ಇಲಾಖೆ ಹಾಗೂ ರೈಲು ವ್ಯವಸ್ಥೆಯ ಮೇಲೆ ಇಟ್ಟಿರು ನಂಬಿಕೆ. ಬಾರತೀಯರ ಅಭಿಮಾನವೇ ಇಂದು ರೈಲ್ವೆ ಇಲಾಖೆಯ ಈ ಸಾಧನೆಗೆ ಕಾರಣ, ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿ ಕೊಂಡಿದ್ದಾರೆ.
Publisher: ಕನ್ನಡ ನಾಡು | Kannada Naadu